ಮತ್ತಾಯ -
ಯೇಸುವಿನ ಹನ್ನೆರಡು ಮಂದಿ ಶಿಷ್ಯರ ಪೈಕಿ ಒಬ್ಬ. ಮಾರ್ಕನ ಸುವಾರ್ತೆಯಲ್ಲಿ ಕಂಡುಬರುವ ಅಲ್ಫಾಯನ ಮಗನಾದ `ಲೇವಿ ಎಂಬಾತ ಈ ಮತ್ತಾಯನೇ ಇರಬೇಕು. ಈತ ಮೊದಲು ಕಪೆರ್ನೌಮಿನಲ್ಲಿ ಸುಂಕ ವಸೂಲಿ ಮಾಡುತ್ತಿದ್ದು, ಯೇಸುವಿನ ಕರೆಗೆ ಓಗೊಟ್ಟು ತನ್ನ ಕೆಲಸ ತ್ಯಜಿಸಿ ಯೇಸುವನ್ನು ಹಿಂಬಾಲಿಸಿದ.  ಈತನ ಬಗ್ಗೆ ಹೆಚ್ಚು ವಿಷಯಗಳು ಹೊಸ ಒಡಂಬಡಿಕೆಯಲ್ಲಿ ದೊರಕುವುದಿಲ್ಲ. 

ಮತ್ತಾಯ ಬರೆದ ಸುವಾರ್ತೆ; ಅನೇಕ ವಿದ್ವಾಂಸರ ಪ್ರಕಾರ ಈ ಸುವಾರ್ತೆಯನ್ನು ಯೇಸುಕ್ರಿಸ್ತನ ಶಿಷ್ಯರಲ್ಲೊಬ್ಬನಾದ ಮತ್ತಾಯ ಬರೆದಿರಲಾರನೆಂದೂ ಆದರೆ ಯೆಹೂದ್ಯ ಕ್ರೈಸ್ತನೊಬ್ಬ ಬರೆದಿರಬೇಕೆಂದೂ ಅಭಿಪ್ರಾಯಪಡಲಾಗಿದೆ. ಇದಕ್ಕೆ ಆಧಾರಗಳಿಲ್ಲ. ಹೇಗೂ ಅಪೋಸ್ತಲರಲ್ಲಿ ಒಬ್ಬನಾದ ಮತ್ತಾಯ ಸಂಗ್ರಹಿಸಿದ ಇಲ್ಲವೆ ಬರೆದ ಹಲವಾರು ವಿಷಯಗಳು ಇದರಲ್ಲಿ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. 

ಇದು ಮಾರ್ಕನ ಸುವಾರ್ತೆಯ ಅನಂತರ ರಚಿತವಾದದು. ಎಂದರೆ ಕ್ರಿ.ಶ. 70-85ರ ಒಳಗೆ ರಚಿತವಾಗಿರಬೇಕು. ಪಾಲೆಸ್ತೀನಿನ (ಈಗಿನ ಇಸ್ರೇಲ್ ಮತ್ತು ಜಾರ್ಡನ್) ಆಚಾರ ವಿಚಾರಗಳ ಬಗ್ಗೆ ಪರಿಚಯವಿದ್ದ ಯೆಹೂದ್ಯರಿಗೆ ಬಹುಶಃ ಅಂತಿಯೋಕ್ಯದ (ಈಗಿನ ತುರ್ಕಿಯ ದಕ್ಷಿಣದಲ್ಲಿರುವ ಅಂತಾಕ್ಯ) ಕ್ರೈಸ್ತಸಭೆಗೆ ಬರೆದ ಎನ್ನಲಾಗಿದೆ. 

ಇದನ್ನು ಬರೆದ ಉದ್ದೇಶ ಇವರ ಪ್ರಾರಂಭವಾಕ್ಯದಲ್ಲೇ ಅಡಗಿದೆ. ಇಡೀ ಕೃತಿಯನ್ನು ಅದರ ಬೆಳಕಿನಲ್ಲಿ ನೋಡಿದರೆ ಸಾಮಾನ್ಯವಾಗಿ ಯೆಹೂದ್ಯರು ಭಾವಿಸಿದಂತೆ ಯೇಸು ಒಬ್ಬ ಸಾಮಾನ್ಯ ಬಡಗಿಯ ಮಗ ಮಾತ್ರವಲ್ಲ ಇಸ್ರಾಯೇಲ್ಯರ ಮೂಲ ಪುರುಷ ಮತ್ತು ಶ್ರೇಷ್ಠ ರಾಜ ಎನಿಸಿದ ಅಬ್ರಹಾಮ ಮತ್ತು ದಾವೀದರ ಕುಟುಂಬಕ್ಕೆ ಸೇರಿದವ. ಸ್ವತಃ ಯೆಹೂದ್ಯನಾಗಿದ್ದ ಮತ್ತಾಯ ಸ್ವದೇಶೀಯರಿಗೆ ಯೇಸುವೇ ನಿಜವಾದ ಮೆಸ್ಸೀಯನೆಂದು ತಿಳಿಸಿ ಯಾರು ಅನಾದಿಕಾಲದಿಂದಲೂ ದೇವರ ಸ್ಥಾನದಲ್ಲಿ ನಿಂತು ಅನೇಕ ಪವಾಡಗಳನ್ನು ಮಾಡುತ್ತ ಪ್ರಕಟಗೊಂಡು ಯೆಹೂದ್ಯರ ಚರಿತ್ರೆಯಲ್ಲಿ ಸೇರಿಹೋಗಿದ್ದನೋ ಅಂಥವನ ವಿಷಯವನ್ನು ಸ್ವಷ್ಟಪಡಿಸುತ್ತಿದ್ದೇನೆ ಎನ್ನುತ್ತಾನೆ. ಆದಿಕಾಲದಿಂದಲೂ ಯೇಸುವಿಗೂ ಮನ್ಯಷ್ಯರಿಗೂ ಎಲ್ಲ ಶತಮಾನಗಳಲ್ಲಿ ಇದ್ದ ಸಂಬಂಧ ತೋರಿಸುತ್ತಾನೆ. ಯೇಸು ಪ್ರವಾದಿಗಳ ವಚನಗಳನ್ನು ನೆರವೇರಿಸುವನಾಗಿದ್ದನೆಂದು ತಿಳಿಯಪಡಿಸಲು ಹಳೆಯ ಒಡಂಬಡಿಕೆಯಿಂದ ನಲವತ್ತು ಆಧಾರವಚನಗಳನ್ನು ಹೇಳುತ್ತಾನೆ. ಈತನ ಸುವಾರ್ತೆ ಪ್ರಸಿದ್ಧವಾದುದು, ಎಲ್ಲರೂ ಗೌರವಿಸುವಂಥದ್ದಾಗಿದೆ. ಹಲವಾರು ಈ ಸುವಾರ್ತೆಯಿಂದಲೆ ಹೆಚ್ಚಿನ ಸಂಗತಿಗಳನ್ನು ಉದಾಹರಿಸುತ್ತಾರೆ. ಒಟ್ಟಿನಲ್ಲಿ ಇದು ಹಳೆಯ ಮತ್ತು ಹೊಸ ಒಡಂಬಡಿಕೆಗೆ ಸಂಬಂಧ ಬೆಳೆಸುವ ಕೊಂಡಿಯಂತಿದೆ.

ಇದನ್ನು ವೈದಿಕ ಸುವಾರ್ತೆ ಎಂದೂ ಕರೆಯಲಾಗಿದೆ. ಇದರಲ್ಲಿ ಧರ್ಮಶಾಸ್ತ್ರ ಮತ್ತು ನೀತಿಶಾಸ್ತ್ರಗಳಿಗೆ ಸಂಬಂಧಪಟ್ಟ ವಿಷಯಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ ಯೆಹೂದ್ಯರ ಗಮನ ಸೆಳೆದು, ಅವರಲ್ಲಿ ಶ್ರದ್ಧೆ ಹೆಚ್ಚಿಸಿ, ಕ್ರಿಸ್ತನ ಕಡೆಗೆ ಅವರ ಒಲವು ತಿರುಗಿಸಲು ಬರೆದುದಾಗಿದೆ ಎನ್ನಲಾಗಿದೆ. ಆದರೆ ಈ ಸುವಾರ್ತೆ ಯೇಸುವಿನ ಜೀವನಚರಿತ್ರೆಯಲ್ಲ; ಹಾಗೆ ಈ ಕೃತಿ ರಚಿಸುವುದು ಇದರ ಗ್ರಂಥಕರ್ತನ ಉದ್ದೇಶವೂ ಆಗಿರಲಿಲ್ಲ. ಇದು ಧಾರ್ಮಿಕ ದೃಷ್ಟಿಯಿಂದ ಬರೆಯಲ್ಪಟ್ಟ ಸಂಕ್ಷಿಪ್ತ ಕೃತಿ. 
ಕ್ರೈಸ್ತತ್ವ ಪ್ರಾಬಲ್ಯಕ್ಕೆ ಬಂದು ಯೆಹೂದ್ಯರು ಅದನ್ನು ಬಹಳವಾಗಿ ವಿರೋಧಿಸಿ ಯೇಸುವಿನ ವಿಷಯದಲ್ಲಿ ನಿರಾಧಾರ ಸುಳ್ಳು ಹಬ್ಬಿಸಿ (ಉದಾಹರಣೆಗೆ ಆತನ ಪುನರುತ್ಥಾನದ ವಿಷಯದಲ್ಲಿ ಅವರು ಹರಡಿದ್ದ ಹುಸಿನುಡಿ) ಆತ ಯೆಹೂದ್ಯಧರ್ಮಕ್ಕೆ ವಿರುದ್ಧವಾಗಿ ಬೋಧಿಸಿದನೆಂದೂ ಅವರ ಧರ್ಮಶಾಸ್ತ್ರಕ್ಕೆ ವಿರೋಧವಾಗಿ ಜೀವಿಸಿದನೆಂದೂ ಆದ್ದರಿಂದಲೇ ಆತನನ್ನು ಧರ್ಮಶಾಸ್ತ್ರಕ್ಕನುಗುಣವಾಗಿ ಕೊಂದೆವೆಂದೂ ಪ್ರಚಾರಮಾಡುತ್ತಿರುವಲ್ಲಿ ಇದರ ಸತ್ಯಾ ಸತ್ಯಗಳನ್ನು ಆಧಾರಸಹಿತವಾಗಿ ಮತ್ತಾಯ ಎಲ್ಲರ ಗಮನಕ್ಕೆ ತರುತ್ತಾನೆ. 

ಇದನ್ನು ರಚಿಸುವಾಗ ಮತ್ತಾಯ ಒಂದು ಕ್ರಮ ಅನುಸರಿಸಿದ್ದಾನೆ. ವಿಷಯ ಸಂಗ್ರಹಣೆಯಲ್ಲಿ ಐದು ಮುಖ್ಯ ಭಾಗಗಳಿವೆ. ಪ್ರತಿಯೊಂದು ಭಾಗದಲ್ಲೂ ಮೊದಲಿಗೆ ಯಾವುದಾದರೂ ಕಥಾವೃತ್ತಾಂತ ಹೇಳಿ ಅನಂತರ ಯೇಸುವಿನ ಬೋಧನೆಯ ದೀರ್ಘಪ್ರಸ್ತಾಪ ಬರುತ್ತದೆ. ಪ್ರಾರಂಭದ ಎರಡು ಅಧ್ಯಾಯಗಳಲ್ಲಿ ಯೇಸುವಿನ ವಂಶಾವಳಿ ಮತ್ತು ಜನನಗಳ ವಿವರವಿದೆ.  ಇವು ಮುಂದಿನ ಐದುಭಾಗಗಳಿಗೆ ಪೀಠಿಕಾರೂಪದಲ್ಲಿವೆ. ಮೊದಲ ಭಾಗದಲ್ಲಿ ಯೇಸುವಿನ ಮುಂದೂತ ಸ್ನಾನಿಕ ಯೋಹಾನನ ವೃತ್ತಾಂತವೂ ಯೇಸುವಿಗೆ ಅಡವಿಯಲ್ಲಾದ ಶೋಧನೆಗಳೂ ಪ್ರಥಮ ಶಿಷ್ಯರನ್ನು ಆತನು ಕರೆದದ್ದೂ ಪರ್ವತಪ್ರಸಂಗವೆಂದು ಪ್ರಸಿದ್ಧವಾಗಿರುವ ದೀರ್ಘಬೋಧನೆಯೂ ಇದೆ. ಎರಡನೆಯ ಭಾಗದಲ್ಲಿ ಪಾಲೆಸ್ತೀನಿನ ಉತ್ತರದಲ್ಲಿದ್ದ ಗಲಿಲಾಯ ಎಂಬ ಪ್ರದೇಶದಲ್ಲಿ ಆತ ಮಾಡಿದ ಬೋಧನೆ ಮತ್ತು ರೋಗಿಗಳ ಸೇವೆ ಇವುಗಳ ಸಂಕ್ಷಿಪ್ತ ವರದಿಯಿದೆ. ಮೂರನೆಯ ಭಾಗದಲ್ಲಿ ಯೇಸು ಅನೇಕರೊಂದಿಗೆ ಮಾಡಿದ ಸಂಭಾಷಣೆ ಮತ್ತು ಪರಲೋಕರಾಜ್ಯದ ವಿಷಯವಾದ ಬೋಧನೆಗಳಿವೆ. 
ನಾಲ್ಕನೆಯ ಭಾಗದಲ್ಲಿ ಸ್ನಾನಿಕನಾದ ಯೋಹಾನನ ಮರಣ, ಯೇಸುಮಾಡಿದ ಹಲವಾರು ಮಹತ್ಕಾರ್ಯಗಳು ಮುಖ್ಯವಾಗಿ ತನ್ನ ದೈವಶಕ್ತಿಯ ಪ್ರದರ್ಶನಕ್ಕಾಗಿ ಮಾಡದೆ, ಜನರ ಅಗತ್ಯಗಳಿಗೆ ತಕ್ಕಂತೆ ಕನಿಕರದಿಂದ ಮಾಡಿದವು. ಉದಾಹರಣೆಗೆ ಐದುಸಾವಿರ ಜನರಿಗೆ ಊಟಮಾಡಿಸಿದ್ದು, ಸಮುದ್ರದ ಮೇಲೆ ನಡೆದದ್ದು ಮತ್ತು ಸಭೆಯನ್ನು ಕುರಿತಾಗಿ ಬೋಧಿಸಿದ್ದು ಇವೆ. 	

ಅಂತ್ಯಭಾಗದಲ್ಲಿ ಯೆಹೂದ್ಯ ಧರ್ಮಾಧಿಕಾರಿಗಳೊಂದಿಗೆ ನಡೆದ ಚರ್ಚೆಗಳು ಅವರ ಧರ್ಮಾಂಧತೆಯನ್ನು ಯೇಸು ಖಂಡಿಸಿದ್ದು, ಯೇಸು ಹೇಳಿದ ಭವಿಷ್ಯತ್ಕಾಲದಲ್ಲಾಗುವ ವಿಷಯಗಳ ಪ್ರವಾದನೆ, ಆತನ ಶ್ರಮ, ಮರಣ ಮತ್ತು ಪುನರುತ್ಥಾನಗಳಿವೆ. 

ಯೆಹೂದ್ಯರು ತಾವು ಭಾವಿಸಿದಂತೆ ಯೇಸುವನ್ನು ಶಿಲುಬೆಯ ಮೇಲೆ ಕೊಂದು ತಮ್ಮ ಕಾರ್ಯ ಪೂರೈಸಿತೆಂದು ಯೋಚಿಸಿದರೂ ಯೇಸು ಮರಣವನ್ನು ಜಯಿಸಿ ಎದ್ದು ಬಂದು ಅವರ ಮೆಸ್ಸೀಯನಾಗಿದ್ದಾನೆಂದು ಮತ್ತಾಯ ತಿಳಿಸುತ್ತಾನೆ. 												
(ಎಸ್. ಎ. ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ